V.K Sasikala supported independent candidate TTV Dhinakaran has won R K Nagar bi-poll with a margin of more than 30 thousand votes.
ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್.ಕೆ ನಗರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಇಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.ಮೊದಲ ಸುತ್ತಿನಿಂದ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಶಶಿಕಲಾ ನಟರಾಜನ್ ಬೆಂಬಲಿತ ಅಭ್ಯರ್ಥಿ ಟಿಟಿವಿ ದಿನಕರನ್ ಅಂತಿಮ ಸುತ್ತಿನ ಅಂತ್ಯಕ್ಕೆ 68,308 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.ಎರಡನೇ ಸ್ಥಾನವನ್ನು ಎಐಎಡಿಎಂಕೆ ಪಡೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಇ. ಮಧುಸೂದನ್ ಕೇವಲ 36,211 ಮತಗಳನ್ನು ಪಡೆದಿದ್ದಾರೆ.ಡಿಎಂಕೆ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪಕ್ಷದ ಅಭ್ಯರ್ಥಿ ಮರುದು ಗಣೇಶನ್ 18,929 ಮತಗಳನ್ನಷ್ಟೇ ಪಡೆದಿದ್ದಾರೆ. ಇಲ್ಲಿ ಬಿಜೆಪಿ ಮತಗಳಿಕೆ ಮೂರಂಕಿ ದಾಟಿಲ್ಲ. ಕೇವಲ 942 ಮತಗಳನ್ನು ಪಡೆಯಲು ಬಿಜೆಪಿ ಅಭ್ಯರ್ಥಿ ಶಕ್ತವಾಗಿದ್ದಾರೆ.ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕಾಗಿ ರಾಧಾಕೃಷ್ಣನ್ ನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರಕ್ಕೆ ಗುರುವಾರದಂದು ಭರ್ಜರಿ ಮತದಾನ ಕಂಡು ಬಂದಿದೆ.